ವಿಠಲ -
	ಪಾಂಡುರಂಗನ ಮತ್ತೊಂದು ಹೆಸರು. ವೈಷ್ಣವ ಪಂಥದವರ ಆರಾಧ್ಯ ದೈವ. ವಿಷ್ಣು ಶಬ್ದದ ಅಪಭ್ರಂಶ ರೂಪವೇ ವಿಠ. 6ನೆಯ ಶತಮಾನದ ಅನಂತರ ಪಂಡರಪುರ ಗ್ರಾಮ ಮತ್ತು ವಿಠಲನ ಉಲ್ಲೇಖ 1171ರ ಬೆಂಡಿಗೇರಿ ತಾಮ್ರಶಾಸನದಲ್ಲಿ ಬರುತ್ತದೆ. ಶಾಸನದಲ್ಲಿ ಪಂಡರಪುರಕ್ಕೆ ಪೌಂಡರೀಕ್ಷೇತ್ರ ಎಂದೂ ವಿಠಲನಿಗೆ ವಿಷ್ಣು ಎಂದೂ ಉಲ್ಲೇಖಿಸಿದೆ. ಚೌಂಡರಸ ಬರೆದ ಅಭಿನವ ದಶಕುಮಾರ ಚರಿತೆಯಲ್ಲಿ ವಿಠಲನ ಬಗ್ಗೆ ಉಲ್ಲೇಖವಿದೆ. ಈ ಗ್ರಂಥದ ಕೊನೆಯಲ್ಲಿ ಬರುವ ವಿಠಲಾಷ್ಟಕದಲ್ಲಿ ವಿಠಲನ ವರ್ಣನೆಯಿದೆ. ಪಂಡರಪುರದ ದೇವಾಲಯ ಮುಸ್ಲಿಮರಿಂದ ದಾಳಿಗೆ ತುತ್ತಾಗಿತ್ತು. ಆಗ ವಿಠಲನ ವಿಗ್ರಹವನ್ನು ಭಕ್ತರು ಸ್ಥಳದಿಂದ ಸ್ಥಳಕ್ಕೆ ಒಯ್ಯುತ್ತಾ ಸಂರಕ್ಷಿಸಿದರು. ಹಂಪೆಯಲ್ಲಿ ಪ್ರೌಢದೇವರಾಯ ಮತ್ತು ಕೃಷ್ಣದೇವರಾಯರು ವಿಜಯವಿಠಲನ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಆದರೆ ಕಾಲಕ್ರಮೇಣ ಹಂಪೆಯ ವಿಜಯವಿಠಲನ ವಿಗ್ರಹ ಸ್ಥಾನಪಲ್ಲಟಗೊಂಡಿತೆಂದು ಹೇಳಲಾಗಿದೆ. ಈಗ ಹಂಪೆಯಲ್ಲಿ ವಿಜಯವಿಠಲನ ದೇವಾಲಯದಲ್ಲಿ ಮೂರ್ತಿ ಇಲ್ಲ. ಹೀಗಾಗಿ ಕರ್ನಾಟಕದ ಭಕ್ತರಿಗೂ ಪಂಡರಪುರವೇ ಯಾತ್ರಾಸ್ಥಳವಾಯಿತು.

	ವಿಠಲ ಸಂಪ್ರದಾಯ ಮಹಾರಾಷ್ಟ್ರದಲ್ಲಿ ಭಾಗವತ ಧರ್ಮದ ಒಂದು ಅಂಗ, ವಿಠಲನನ್ನು ಕುರಿತು ಜ್ಞಾನದೇವ, ತುಕಾರಾಮ್, ನಾಮದೇವ ಮುಂತಾದವರು ಉಲ್ಲೇಖಿಸಿದ್ದಾರೆ; ಕೀರ್ತನೆಗಳನ್ನು ರಚಿಸಿದ್ದಾರೆ.

	ವಿಠಲ ಎಂಬುದು ಹರಿದಾಸರ ಅಂಕಿತ ಅಥವಾ ಮುದ್ರಿಕೆಯೂ ಆಗಿದೆ. ಗುರುಗಳಾದ ವ್ಯಾಸರಾಯರಿಂದ ಪುರಂದರದಾಸರು ಪುರಂದರ ವಿಠಲ ಎಂಬ ಅಂಕಿತವನ್ನು ಪಡೆದು ವಿಠಲನ ಸರ್ವೋತ್ತಮತ್ವವನ್ನು ಕೊಂಡಾಡಿದ್ದಾರೆ. ವಿಜಯದಾಸರು ವಿಜಯ ವಿಠಲ ಎಂಬ ಅಂಕಿತವನ್ನು ಪಡೆದರೆ ಗೋಪಾಲದಾಸರು ಗೋಪಾಲ ವಿಠಲ, ಜಗನ್ನಾಥ ದಾಸರು ಜಗನ್ನಾಥ ವಿಠಲ ಎಂಬ ಅಂಕಿತದಿಂದ ಕೃತಿರಚನೆ ಮಾಡಿದ್ದಾರೆ.						
		(ವಿ.ಎನ್.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ